ಸತ್ತ ಕನಸನ್ನೆತ್ತಿ ಮತ್ತೆ ನೀರೆರೆದು
ಚಿಗುರಿಸಿದ ನೀರೆ ನೀನು ಯಾರೆ ?
ಮುಗಿಲಲ್ಲಿ ಅಲೆಸಿರುವ ಕೀಲುಕುದುರೆ, ನನ್ನ
ಅಮಲಿನಾಳದಲದ್ದಿದಂಥ ಮದಿರೆ.
ಉರಿವ ಬಿಸಿಲಿಗೆ ತಂಪುಗಾಳಿ ಸುಳಿಸಿ
ಮಣ್ಣಲ್ಲಿ ಮೋಡಗಳ ಬಣ್ಣ ಕಲೆಸಿ
ಮಾತ ಮರ್ಜಿಗೆ ಸಿಗದ ಉರಿಯ ಚಿಗುರುಗಳನ್ನ
ಕಣ್ಣಲ್ಲಿ ನಿಲಿಸಿ
ಬೊಗಸೆ ಮುಖದಲಿ ಮನಸ ಮೊಗೆದು ಸುರಿವ
ನೀನು ಯಾರೆ ಚೆಲುವೆ,
ನೀನು ಯಾರೆ?
ನೀ ಬಂದು ನಿಂತೆಯೋ ಎದುರು
ಹಾರಿಹೋಗುವುದಲ್ಲ ಪರಿವೆ.
ಬಿದ್ದ ದೇವಾಲಯದ ನವರಂಗ ಮಂಟಪಕೆ
ಮತ್ತೆ ಜೀರ್ಣೋದ್ಧಾರ ನಡೆಸಿದವಳೆ,
ಈ ಕಾಡಲ್ಲಿ
ದಾರಿ ಹುಡುಕಿದೆ ಹೇಗೆ ಚದುರೆ?
ದಾರಿ ಹುಡುಕಿದೆ ಹೇಗೆ ಚದುರೆ ಈ ಕಾಡಲ್ಲಿ
ನೂರು ನೋವು ಕಾಲ ಕಚ್ಚುವಲ್ಲಿ?
ಇಷ್ಟು ನಡೆದರು ದಾರಿ ಹುಡುಕಿ ಬಂದೀ ಗುಡಿಗೆ
ಬರಲೊಲ್ಲೆ ನಿಂತಿರುವೆ ಬಾಗಿಲಲ್ಲಿ.
ಮತ್ತೆ ಬೆಳಗಿದ ದೀಪ, ಮುಖವನೆತ್ತಿದ ಶಿಲ್ಪ
ಪೂಜೆ ಆರತಿ ಶಂಖ ಜಾಗಟೆದನಿ
ನಲಿವು ಮಡುಗಟ್ಟಿ ನಿಂತಿದೆ ಗರ್ಭಗುಡಿಯಲ್ಲಿ,
ನೀನೊ ನಾಲ್ಕಡಿ ಆಚೆ ದೂರದಲ್ಲಿ.
ಕರೆದೀತು ಹೇಗೆ ಕಲ್ಲದೇವರು ಬಳಿಗೆ?
ಕರೆದಿರೂ ನೀ ಹೋಗುವವಳಲ್ಲ ಒಳಗೆ,
ಸತ್ತ ಬದುಕನ್ನೆತ್ತಿ ನಿಲ್ಲಿಸಿದ ಒಲವಿಗೆ
ಮೌನದಲ್ಲೆ ಎಲ್ಲ ಕೃತಜ್ಞತೆ ಕಡೆಗೆ.
*****
ದೀಪಿಕಾ ಕವನಗುಚ್ಛ